ಕಣ್ಣಿದ್ದು ಕುರುಡರಾದ ಅಧಿಕಾರಿಗಳು..!
ಅಂಬೇಡ್ಕರ್ ಕಾಲೋನಿ ಜನರ ಭವಣೆಗಳು.!?
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಗ್ರಾಮದ ಡಾ॥ಬಿ.ಆರ್. ಅಂಬೇಡ್ಕರ್ ಕಾಲೋನಿಗೆ ಕಳೆದ ಮೂರು ದಶಕಗಳಿಂದಲೂ ಒಂದೇ ಒಂದು ಮೂಲ ಸೌಕರ್ಯ ಒದಗಿಸಿಲ್ಲ..! ಕಾರಣ ದಲಿತರಿರುವ ಓಣಿ ಎಂಬ ನಿರ್ಲಕ್ಷ್ಯ ಧೋರಣೆ ಶೋಷಣೆಗೀಡು ಮಾಡಲಾಗುತ್ತಿದ್ದು, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದ ಇಲಾಖಾಧಿಕಾರಿಗಳು ಶೀಘ್ರವೇ ಖುದ್ದು, ಸ್ಥಳಕ್ಕಾಗಮಿಸಬೇಕು ತುರ್ತಾಗಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಅದು ಅವರ ಕರ್ತವ್ಯವಾಗಿದೆ ನಿರ್ಲಕ್ಷ್ಯ ಧೋರಣೆಯಿಂದ ಹಾಗೂ ಉದ್ಧಟತನದಿಂದ ವರ್ತಿಸಿದರೆ, ಹೋರಾಟದ ಮೂಲಕ ತಕ್ಕ ಶಾಸ್ತಿ ಮಾಡಲಾಗುವುದು. ಹಂತ ಹಂತವಾಗಿ ಹೋರಾಟ ಪ್ರಾರಂಭಿಸಲಾಗುವುದು, ಕಚೇರಿಗೆ ಬೀಗ ಜಡಿದು ಹೋರಾಟ ಹಮ್ಮಿಕೊಳ್ಳಲಾಗುವುದೆಂದು, ದಲಿತ ಮುಖಂಡ ಹಾಗೂ ರೈತ ಸಂಘದ ಮುಖಂಡರಾದ ಸಿದ್ದೇಶಪ್ಪ ಎಚ್ಚರಿಸಿದ್ದಾರೆ. ಅವರು ಮಾತನಾಡಿ, ಕಳೆದ ಮೂರು ದಶಕಗಳಿಂದ, ನಾಗರೀಕತೆಗೆ ಸಾಕ್ಷಿಯಾಗುವ ರಸ್ತೆಯನ್ನು ನಿರ್ಮಿಸುವಂತೆ. ಸಂಬಂಧಿಸಿದ ಇಲಾಖೆಗಳಿಗೆ ಕಳೆದ ಮೂರು ದಶಕಗಳಿಂದಲೂ ಅರ್ಜಿ ನೀಡಲಾಗುತ್ತಿದೆ, ಆದರೆ ಅವರಿಗೆ ಸ್ಪಂಧಿಸುವ ವ್ಯವಧಾನವೇ ಇಲ್ಲ. ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಯಾವ ಜನಪ್ರತಿನಿಧಿಗಳು ಬಂದು ಕಷ್ಟ ಆಲಿಸುತ್ತಿಲ್ಲ, ನಮ್ಮ ಕಾಲಿಗೆ ಬಿದ್ದು ಓಟು ಹಾಕಿಸಿಕೊಂಡವರು ಹಾಗೂ ಅವರ ಪರವಾಗಿ ಮನೆ ಮನೆಯ ಬಾಗಿಲಿಗೆ ಬಂದು ಓಟಿನ ಭಿಕ್ಷೆ ಬೇಡಿದವರು ಈಗ ತಿರುಗಿಯೂ ನೋಡುತ್ತಿಲ್ಲ.!? ಗ್ರಾಮದ ಮುಖಂಡರೆನಿಸಿಕೊಂಡವರು ತಮ್ಮ ಜವಾಬ್ದಾರಿ ಮರೆತಿದ್ದಾರೆ, ಸಂಬಂಧಿಸಿದ ಇಲಾಖಾಧಿಕಾರಿಗಳು ಕೂಡ ಇವರ ಕೈ ಗೊಂಬೆಗಳಂತೆ ವರ್ತಿಸುತ್ತಿದ್ದು. ಅಂಬೇಡ್ಕರ್ ರವರ ಸಂವಿಧಾನದಡಿ ಸರ್ಕಾರಿ ನೌಕರಿಯಲ್ಲಿದ್ದು ಸರ್ಕಾರಿ ಸಂಬಳ ತಿನ್ನೋ ಇವರು, ಅಂಬೇಡ್ಕರ್ ಕಾಲೋನಿಯನ್ನು ದಿಕ್ಕರಿಸಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದು ಕಾಲೋನಿ ವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯೋ ನೀರಿಗಾಗಿ ಅರ್ಧ ಮೈಲು ನಡಿಬೇಕಿದೆ, ಅಲ್ಲಿಂದ ಹೊತ್ತು ತರಬೇಕಿದೆ. ಬೀದಿ ದೀಪಗಳಿಲ್ಲ ಕಾಡುಗತ್ತಲಲ್ಲೇ ನಿತ್ಯದ ಜೀವನ, ಇಡೀ ಮುವತ್ತು ಮನೆಗಳಿಗೆ ಒಂದೇ ಒಂದು ಬೀದಿ ದೀಪವಿದೆ..ಅದು ಬೆಳಗದಿದ್ದರೆ ಕಾಡುಗತ್ತಲಿನಲ್ಲೇ ರಾತ್ರಿ ಕಳೆಯಬೇಕಿದೆ, ಮನೆಗಳು ಹೊಲ ಹಾಗೂ ಕಾಡಂಚಿಗೆ ಹೊಂದಿಕೊಂಡಿದ್ದು. ಸಂಜೆ ಹೊತ್ತಾದರೆ ಸಾಕು ಮನೆಯೊಳಗೆ ಸೇರಿದರೆ ಮತ್ತೆ ಸೂರ್ಯ ಹುಟ್ಟಿದ ಮೇಲೆಯೇ ಮನೆಯಾಚೆಗೆ ಬರಬೇಕಾಗಿದೆ. ಕತ್ತಲಾದರೆ ಕ್ರಿಮಿ ಕೀಟಗಳ ಹಾಗೂ ಕಾಡು ಪ್ರಾಣಿಗಳ ಹಾವಳಿಯ ಭಯ ಬೆಂಬಿಡದೇ ಕಾಡುತ್ತದೆ.. ರಾತ್ರಿ ಪೂರಾ ನೆಮ್ಮದಿಯ ನಿದ್ದೆ ಮಾಡಿರೋ ದಿನಗಳೇ ಅಪರೂಪವಾಗಿದೆ ಅಗತ್ಯ ವಿದ್ಯುತ್ ಕಂಬಗಳನ್ನು ಬಿರ್ಮಿಸಲು ಇಲಾಖೆಗೆ ಸಾಕಷ್ಟು ಆರ್ಜಿ ನೀಡಲಾಗಿದೆ, ಈವರೆಗೂ ವಿದ್ಯುತ್ ಇಲಾಖಾಧಿಕಾರಿಗಳು ಬಂದಿಲ್ಲ. ಕುಡಿಯೋ ನೀರಿನ ಸೌಲಬ್ಯಕ್ಕಾಗಿ ಹತ್ತಾರು ಬಾರಿ ಅರ್ಜಿ ಹಾಕಲಾಗಿದೆ, ಸಂಬಂಧಿಸಿದಂತೆ ಸ್ಪಂಧನೆ ದೊರಕಿಲ್ಲ. ಕಾರಣ ಕುಡಿಯೋ ನೀರಿಗಾಗಿ ಮುವತ್ತು ಕುಟುಂಬಗಳು, ಹಪಹಪಿಸುವಂತಾಗಿದೆ ಅಗತ್ಯ ನೀರಿಗಾಗಿ ಅರ್ಧ ಕಿಲೋ ಮೀಟರ್ ಕ್ರಮಿಸಿ ಅಲ್ಲಿಂದ ನೀರು ಹೊತ್ತು ತರಬೇಕಿದೆ. ಅಗತ್ಯ ನಳಗಳನ್ನಾಗಲೀ ಅಥವಾ ಬೋರ್ ವೆಲ್ ಹಾಕಿಸಿ ಮಿನಿ ಟ್ಯಾಂಕ್ ಗಳನ್ನು ನಿರ್ಮಿಸುವಂತೆ, ಹತ್ತಾರು ಬಾರಿ ಅರ್ಜಿ ನೀಡಲಾಗಿದೆ. ಮುವತ್ತು ವರ್ಷಗಳಾದರೂ ಅಧಿಕಾರಿಗಳಿಗೆ ಇತ್ತ ಬರಲು ಆಗುತ್ತಿಲ್ಲ, ಯಾವ ಇಲಾಖೆಯವರು ಸಹ ತಮ್ಮ ಕರ್ತವ್ಯ ಪಾಲಿಸುತ್ತಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಿಸಿ ಎಂದು ಸಾಕಷ್ಟು ಬಾರಿ ಅರ್ಜಿಗಳನ್ನು ನೀಡಲಾಗಿದೆ, ಕನಿಷ್ಠ ಮಣ್ಣಾಕಿ ರಸ್ತೆ ಸಮತಟ್ಟಾಗಿಯಿ ಮಾಡಿಕೂಡಲಿಲ್ಲ. ಇದಕ್ಕಿಂತ ಶೋಷಣೆ ಮತ್ತೊಂದಿದೆಯಾ.!?
ನಾಚಿಕೆಯಾಗಬೇಕಿದೆ ಮುಖಂಡರೆನಿಸಿಕೊಂಡವರಿಗೆ ಹಾಗೂ ಅಧಿಕಾರಿಗಳಿಗೆ ಎಂದು ಮಹಿಳೆಯರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮ ಪಂಚಾಯ್ತಿ ಎಲೆಕ್ಷನ್ನಾಗ ಓಟನ್ನು ಭಿಕ್ಷೆ ಬೇಡಾಕ ಬರೋರು, ನಮ್ಮ ಕಾಲು ಹಿಡಿದು ಆಟೋ ಈಟೋ ರೊಕ್ಕ ಕೊಟ್ಟು ಓಟಾಕ್ಸಿಕಂಡು ಗೆಲ್ತೀರಾ... ಅಮೇಗ ಸತ್ತೀರಾ ಬದುಕೀರಾ.. ಅಂತ ಕೂಡ ಕೇಳಲ್ಲ. ನಮಗೆ ಸರ್ಕಾರ ಕೊಡಾ ಸೌಲತ್ತು ನಮಗೆ ಕೊಡ್ರಿ ಅಂದ್ರೆ, ನಿಮ್ಮನೇಗಿಂದು ನಿಮ್ಮ ಪಿರ್ತಾರ್ಜಿತ ಆಸ್ತಿ ಕೊಡೋರಂಗ ಆಡ್ತೀರಾ.. ಎಂದು ಅಂಬೇಡ್ಕರ್ ಕಾಲೋನಿ ಜನರು, ಸ್ಥಳೀಯ ಜನಪ್ರತಿನಿಧಿಗಳನ್ನು ಮಾತಿನ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳೇ ನೀವು ನಮ್ಮ ಅಂಬೇಡ್ಕರ್ ಬರೆದಿರೋ ಸಂವಿಧಾನದಿಂದಲೇ, ಮೀಸಲಾತಿ ಗೀಸಲಾತಿಯಿಂದ ಅಧಿಕಾರಿಗಳಾಗ್ತೀರಾ. ಅಧಿಕಾರ ತಗಣಕರಾ ಅಂಗ್ ಸೇವೆ ಮಾಡ್ತೀನಿ ಇಂಗ್ ಸೇವೆ ಮಾಡ್ತೀನಿ ಅಂತ ಪ್ರಮಾಣ ಮಾಡ್ತೀರಾ, ಅಧಿಕಾರಿಗಳಾದ ಮೇಲೆ ನಾವು ಕೋಡೋ ಸರ್ಕಾರದ ರೊಕ್ಕದ ಸಂಬಳದಾಗ ಮೆರಿತೀರ.. ಬದುಕು ಕೊಟ್ಟೀರ ನಮ್ಮ ಅಂಬೇಡ್ಕರ್ ರವರ ಹೆಸರಿನ ಕಾಲೋನಿಗಳನ್ನೇ ಮರಿತೀರಾ, ಹೆಸ್ರು ಅಂಬೇಡ್ಕರ್ ರವ್ರುದು ಮೆರೆಯೋದು ನಮ್ಂತರು ಕೊಡೋ ರೊಕ್ಕದಾಗ.. ನೀವಾ ಜವಾಬ್ದಾರಿ ಅಧಿಕಾರಿಗಳಾಗಿ, ಕೆಲಸ್ಕ್ ಬಾರದ ರಾಜಕಾರಣಿಗಳ ಕೂಲಿ ಆಳಿನಂಗ. ಅವರ ಹೇಳ್ದಂಗ ಗೋಣಾಕಿ, ಅವ್ರ ಕೀಲಿ ಕೊಡ ಗೊಂಬಿಯಂಗ ಆಡ್ತೀರೀ.. ನೀವು ಮನುಷ್ಯರಾ.!? ನಿಮಗೆ ಆತ್ಮ ಸಾಕ್ಷಿ ಐತಾ..!?, ನಾವು ಕತ್ತಲಾಗಿರೋದು ಕಂಡೂ ಕುಲ್ಡುರಾಗಿರಾ ನೀವು.. ಕುಡೇ ನೀರಿಗೆ ಅರ್ಧ ಮೇಲು ನಡಿತಿದಿವಿ, ಅಲ್ಲಿಂದಾ ಹೊತ್ಗಂಡು ಬರ್ತೀವಿ ಇದನ್ನ ಹೇಳ್ಕಂಡ್ರೂ ನಿಮ್ಗೆ ಕರುಣೆ ಬರಲಿಲ್ವಾ..!?. ಕರೆಂಟಿಲ್ದೇ ಕತ್ಲಾಗಾ ರಾತ್ರಿ ಕಳಿತಿದಿವೀ ಕಣ್ಣ ಕಾಣಕಿಲ್ವಾ ನಿಮ್ಗೆ, ನಾವು ನಿಮ್ಮಂಗೇ ಮನುಷ್ಯರು ಸ್ವಾಮಿ. ಎಲೆಕ್ಷನ್ನಾಗ ಓಟಿನ ಭಿಕ್ಷೆ ಬೇಡೋ ರಾಜಕಾರಣಿಗಳಿಗೆ ಕೃತಜ್ಞತೆ ಇಲ್ಲ, ಜನರ ರೊಕ್ಕದ ಸಂಬಳ ತಿನ್ನೋ ಅಧಿಕಾರಿಗಳಿಗೆ ನಿಯತ್ತಿಲ್ಲ.. ಸಮಾಜ ಸೇವೆ ಮಾಡೋ ಹೆಸರಲ್ಲಿ ದೌಲತ್ತು ಮಾಡೋ ಉಡಾಳ ಮುಖಂಡರಿಗೆ, ನಮ್ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ದಲಿತ ಕಾಲೋನಿಯ ಜನ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೀಘ್ರವೇ ಸೌಲಭ್ಯ ಕಲ್ಪಿಸದಿದ್ದರೆ ಗ್ರಾ ಪಂ ಗೆ ಬೀಗ ಮಹಿಳೆಯರಿಂದ ಎಚ್ಚರಿಕೆ..
ಮುವತ್ತು ವರ್ಷಗಳಿಂದ ಅಲೆದಾಡಿದರು ಸಹ ಮೂಲ ಸೌಕರ್ಯಗಳು ಅಂಬೇಡ್ಕರ್ ಕಾಲೋನಿಗೆ ಸಿಕ್ಕಿಲ್ಲ.! ನಮ್ಮ ತಾಳ್ಮೆಗೂ ಇತಿ ಮಿತಿ ಇದೆ, ಇನ್ನು ಹೋರಾಟದ ದಾರಿ ಹಿಡಿಯಲಾಗುವುದು. ಅತಿ ಶೀಘ್ರವೇ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ, ನಮ್ಮ ಅಂಬೇಡ್ಕರ್ ಕಾಲೋನಿಗೆ ಬರಬೇಕು. ಜನಪರ ಕಾಳಜಿಯುಳ್ಳ ಹಾಗೂ ಅಂಬೇಡ್ಕರ್ ಅನುಯಾಯಿಗಳಾದ, ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ರವರೇ ಖುದ್ದಾಗಿ ರಾತ್ರಿ ಹೊತ್ತು ನಮ್ಮ ಕಾಲೋನಿಗೆ ಬರಬೇಕು. ವಸ್ತು ಸ್ಥಿತಿ ಅರಿತು ಅಗತ್ಯ ಕ್ರಮಗಳನ್ನು ಶೀಘವೇ ಜರುಗಿಸಬೇಕು, ನಿರ್ಲಕ್ಷ್ಯ ಧೋರಣೆ ತಾಳಿದರೆ ಗ್ರಾಮ ಪಂಚಾಯ್ತಿಗಳಿಗೆ ಬೀಗ ಜಡಿಯಲಾಗುವುದು. ಮತ್ತು ಟಿವಿ ಮಾಧ್ಯಮಗಳ ಮೂಲಕ ಕಚೇರಿಗಳಿಗೆ ಸಾಕ್ಷ್ಯಾಧಾರಗಳ ಸಮೇತ ದೂರು ನೀಡಲಾಗುವುದು, ಹಾಗೂ ಜಿಲ್ಲಾಧಿಕಾರಿಗಳಲ್ಲಿ ಸ್ಥಳೀಯ ಅಧಿಕಾರಿಗಳ ಮೇಲೆ ಲಿಖಿತ ದೂರು ನೀಡಲಾಗುವುದು. ಅಗತ್ಯವಾದಲ್ಲಿ ಇಲಾಖಾಧಿಕಾರಿಗಳ ಅಮಾನೀಯತೆಯ ವಿರುದ್ಧ, ಕಾನೂನು ರೀತ್ಯ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದೆಂದು ಹೋರಾಟಗಾರರು ಈ ಮೂಲಕ ಎಚ್ಚರಿಸಿದ್ದಾರೆ








