ಶ್ರೀನಿವಾಸ ಟಿ. ದಾಸಕರಿಯಪ್ಪ ಅವರು 1981ರ ಫೆಬ್ರವರಿ 1ರಂದು ದಾವಣಗೆರೆಯಲ್ಲಿ ಜನಿಸಿದ ಶ್ರೀನಿವಾಸ ಟಿ. ದಾಸಕರಿಯಪ್ಪ ಅವರು ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ವೃತ್ತಿಯಿಂದ ಕೃಷಿಕ, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಅವರು ಕಳೆದ ಸುಮಾರು 20 ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.
ಪಕ್ಷದಲ್ಲಿ ಅವರು ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷರಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ದಾವಣಗೆರೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಐದು ವರ್ಷಗಳ ಅನುಭವ ಹೊಂದಿದ್ದಾರೆ. ಪಕ್ಷದ ತಳಮಟ್ಟದ ಸಂಘಟನೆಗಳಿಂದಲೇ ರಾಜಕೀಯ ಪ್ರವೇಶ ಪಡೆದ ಅವರು ದೀರ್ಘಕಾಲದಿಂದ ಕ್ಷೇತ್ರ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿಯೂ ಶ್ರೀನಿವಾಸ ದಾಸಕರಿಯಪ್ಪ ಅವರು ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆ ಹಿಂದೂ ಮಹಾಸಭಾ ಗಣಪತಿ ಸಂಸ್ಥೆಯ ಉಪಾಧ್ಯಕ್ಷರಾಗಿ, ದೇವನಾಗರಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ದಾವಣಗೆರೆ ವೈಟ್‌ಲಿಫ್ಟಿಂಗ್ ಅಸೋಸಿಯೇಷನ್, ಸಮೃದ್ಧಿ ಸಹಕಾರ ಸಂಘ ಹಾಗೂ ಕಲಾವಿದರು-ನರ್ತಕರ ಸಂಘಟನೆಗಳಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಕುಟುಂಬ ಹಿನ್ನೆಲೆಯನ್ನು ನೋಡುವುದಾದರೆ, ಇವರ ತಂದೆ ಟಿ. ದಾಸಕರಿಯಪ್ಪ ಅವರು ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾಗಿದ್ದರು. ಪತ್ನಿ ಸಂಧ್ಯಾ, ಇವರಿಗೆ ಸ್ಕಂದನ್ ದಾಸ್ ಮತ್ತು ಕೇಶವ್ ದಾಸ್ ಎಂಬ ಇಬ್ಬರು ಪುತ್ರರಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದಲೇ ಹಲವು ವರ್ಷಗಳಿಂದ ಕ್ಷೇತ್ರ ರಾಜಕೀಯದಲ್ಲಿ ಚಟುವಟಿಕೆ ನಡೆಸುತ್ತಿದ್ದ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಇದೀಗ ಬಿಜೆಪಿ ಅಧಿಕೃತ ಟಿಕೆಟ್ ನೀಡಿರುವುದು ಸ್ಥಳೀಯ ರಾಜಕೀಯದಲ್ಲಿ ಗಮನ ಸೆಳೆದಿದೆ.
ದಾವಣೆಗೆರೆ ದಕ್ಷಿಣ ಕ್ಷೇತ್ರದಲ್ಲಿ 13 ಸಾವಿರ ಮತ ಹೊಂದಿರುವ ಎಸ್ ಟಿ ಸಮೂದಾಯಕ್ಕೆ ಟಿಕೆಟ್ ಘೋಷಣೆ ಮಾಡಲಾಗಿದೆ. ಬಿಜೆಪಿಯ ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷರಾಗಿರುವ ಶ್ರೀನಿವಾಸ್ ಹಲವು ಚುನಾವಣೆಗಳಲ್ಲಿ ಟಿಕೆಟ್ ವಂಚಿತರಾಗಿ ಬೇಸರಗೊಂಡಿದ್ದರು. ಇತ್ತೀಚೆಗೆ ಪಕ್ಷೇತ್ರರಾಗಿ ಸ್ಪರ್ಧೆ ಮಾಡುವ ಕುರಿತು ಶ್ರೀನಿವಾಸ್ ಇಂಗಿತ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಬಾರಿ ಬಿಜೆಪಿ ಪ್ರಬಲ ಸಮುದಾಯದ ಬದಲು ಪರಿಶಿಷ್ಠ ಪಂಗಡಕ್ಕೆ ಅವಕಾಶ ನೀಡಿದೆ.
ಈ ಹಿನ್ನೆಲೆಯಲ್ಲಿ ಲಿಂಗಾಯತ ಅಥವಾ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎನ್ನುತ್ತಿದ್ದ ಕಾಂಗ್ರೆಸ್ ಪಾಳಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಮತ್ತು ಗೊಂದಲಗಳಿಗೆ ಕಾರಣವಾಗಿದೆ.
ಒಂದೇ ಕುಟುಂಬಕ್ಕೆ ಅಧಿಕಾರ ಬೇಡ
ಶಾಮನೂರು ಕುಟುಂಬದವರು ಟಿಕೆಟ್‌ಗಾಗಿ ತೀವ್ರ ಪಟ್ಟು ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಜಬ್ಬಾರ್, ಈಗಾಗಲೇ ಆ ಕುಟುಂಬದ ಹಲವರು ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಅನುಭವಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಒಂದೇ ಕುಟುಂಬಕ್ಕೆ ಮಣೆ ಹಾಕಿದರೆ ಅದು ಇಡೀ ರಾಜ್ಯದ ರಾಜಕೀಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಅವರ ವಾದವಾಗಿದೆ. ಅಂತಿಮವಾಗಿ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಆದರೆ, ಮುಸ್ಲಿಂ ಸಮುದಾಯಕ್ಕೆ ಈ ಬಾರಿಯೂ ನಿರಾಸೆ ಮೂಡಿಸಿದರೆ, ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ನಿರಾಸಕ್ತಿ ಹೊಂದಿ ಬೇರೆ ಪಕ್ಷಗಳತ್ತ ವಾಲುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ
ಬಿಜೆಪಿಯ ಎಸ್‌ಟಿ ಅಸ್ತ್ರ ಮತ್ತು ಜಾತಿ ಸಮೀಕರಣ:
ದಾವಣಗೆರೆ ದಕ್ಷಿಣದಲ್ಲಿ ಕೇಸರಿ ಪಡೆ ಈ ಬಾರಿ ಅತ್ಯಂತ ಚಾಣಾಕ್ಷ ನಡೆ ಇಟ್ಟಿದೆ. ಹತ್ತು ಹಲವು ಲೆಕ್ಕಾಚಾರಗಳನ್ನು ಹಾಕಿರುವ ಬಿಜೆಪಿ ಹೈಕಮಾಂಡ್, ಸಾಮಾನ್ಯ ಕ್ಷೇತ್ರದಲ್ಲಿ ಎಸ್‌ಟಿ ಸಮುದಾಯದ ಶ್ರೀನಿವಾಸ ದಾಸ ಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ನಿರಂತರವಾಗಿ ಸೋಲುತ್ತಿರುವ ಅಭ್ಯರ್ಥಿಗಳನ್ನು ಬದಲಿಸಿ, 'ಗೆಲ್ಲುವುದೊಂದೇ ಮಾನದಂಡ' ಎಂಬ ಸೂತ್ರದಡಿ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ.
ಶ್ರೀನಿವಾಸ ದಾಸ ಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಪಕ್ಷದೊಳಗಿನ ಬಣ ರಾಜಕಾರಣಕ್ಕೆ ಬ್ರೇಕ್ ಹಾಕಲು ಬಿಜೆಪಿ ಮುಂದಾಗಿದೆ. ದಾವಣಗೆರೆಯ ಸ್ಥಳೀಯ ಎರಡು ಬಣಗಳ ನಾಯಕರೊಂದಿಗೂ ಆತ್ಮೀಯತೆ ಹೊಂದಿರುವ ಇವರು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬಲ್ಲರು ಎಂಬುದು ಪಕ್ಷದ ನಂಬಿಕೆ. ಅಲ್ಲದೆ, ಬಾಗಲಕೋಟೆ ಮತ್ತು ವಿಧಾನಪರಿಷತ್‌ನ 3 ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಮಣೆ ಹಾಕಿರುವ ಹಿನ್ನೆಲೆಯಲ್ಲಿ, ಇಲ್ಲಿ ದಲಿತ ವರ್ಗಕ್ಕೆ ಅವಕಾಶ ನೀಡಿ ಜಾತಿ ಸಮೀಕರಣದ ಮೂಲಕ ಮತಬೇಟೆಗೆ ಬಿಜೆಪಿ ಸಜ್ಜಾಗಿದೆ.
ಕಾಂಗ್ರೆಸ್‌ನಲ್ಲಿ ಶುರುವಾದ ಟಿಕೆಟ್ ಗೊಂದಲ:
ಬಿಜೆಪಿಯ ಈ ನಡೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿಯ ಎಸ್‌ಟಿ ಅಭ್ಯರ್ಥಿ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ಬುಧವಾರ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಲಿದ್ದು, ದಾವಣಗೆರೆ ದಕ್ಷಿಣದ ಟಿಕೆಟ್ ಗೊಂದಲದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಅವರು ಚುನಾವಣಾ ಸಮಿತಿ ಸದಸ್ಯರು ಮತ್ತು ಸ್ಥಳೀಯ ನಾಯಕರೊಂದಿಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಮುಸ್ಲಿಂ ಸಮುದಾಯದ ಪಟ್ಟು:
ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಈ ಬಾರಿ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬರುತ್ತಿದೆ. 'ಅತಿ ಹೆಚ್ಚು ಸಂಖ್ಯೆಯಲ್ಲಿರುವ ನಮಗೆ ಈ ಬಾರಿ ಆದ್ಯತೆ ನೀಡಬೇಕು' ಎಂದು ಮುಸ್ಲಿಂ ಮುಖಂಡರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಒಂದೊಮ್ಮೆ ತಾಂತ್ರಿಕ ಕಾರಣಗಳಿಂದ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲು ಸಾಧ್ಯವಾಗದಿದ್ದರೆ, ಅದನ್ನು 'ಅಹಿಂದ' ವರ್ಗದವರಿಗೆ ನೀಡಬೇಕು ಎಂಬ ಹೊಸ ಬೇಡಿಕೆಯನ್ನು ಅವರು ಇಟ್ಟಿದ್ದಾರೆ. ಕುರುಬ ಅಥವಾ ಎಸ್‌ಸಿ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಯ ಎಸ್‌ಟಿ ಅಸ್ತ್ರಕ್ಕೆ ಪ್ರತಿತಂತ್ರ ಹೂಡಬೇಕು ಎಂಬುದು ಇವರ ವಾದ.
ನಿರ್ಣಾಯಕ ಹಂತದಲ್ಲಿ ದಕ್ಷಿಣದ ರಾಜಕೀಯ:
ಬಿಜೆಪಿ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿ ಪ್ರಚಾರದ ಅಖಾಡಕ್ಕೆ ಇಳಿದಿದ್ದರೆ, ಕಾಂಗ್ರೆಸ್ ಮಾತ್ರ ಇನ್ನೂ ಅಭ್ಯರ್ಥಿಯ ಆಯ್ಕೆಯಲ್ಲೇ ತೊಳಲಾಡುತ್ತಿದೆ. ಸುರ್ಜೇವಾಲಾ ಅವರ ಭೇಟಿಯ ನಂತರ ಕಾಂಗ್ರೆಸ್ ಮುಸ್ಲಿಂ ಸಮುದಾಯದ ಬೇಡಿಕೆಗೆ ಮಣಿಯುತ್ತದೆಯೇ ಅಥವಾ ಅಹಿಂದ ವರ್ಗದ ಬೇರೆ ನಾಯಕರಿಗೆ ಅವಕಾಶ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ ದಾವಣಗೆರೆ ದಕ್ಷಿಣದ ರಾಜಕೀಯ ಈಗ ರಂಗೇರಿದ್ದು, ಜಾತಿ ಮತ್ತು ತಂತ್ರಗಾರಿಕೆಯ ನಡುವೆ ಯಾರಿಗೆ ಜಯ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ದಿವಂಗತ ಶಾಮನೂರು ಶಿವಶಂಕರಪ್ಪನವರು ಕೂಡ ಈ ಹಿಂದೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಬಗ್ಗೆ ಒಲವು ತೋರಿದ್ದರು ಎಂಬ ಮಹತ್ವದ ವಿಚಾರವನ್ನು ಜಬ್ಬಾರ್ ನೆನಪಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 88,000 ಮುಸ್ಲಿಂ ಮತದಾರರಿದ್ದು, ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವಲ್ಲಿ ಈ ಮತಗಳು ನಿರ್ಣಾಯಕವಾಗಿವೆ. ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವುದು ಸರಿಯಲ್ಲ, ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಶಾಲೆ, ಆಸ್ಪತ್ರೆ ಸೇರಿದಂತೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ ಎಂದು ಜಬ್ಬಾರ್ ಪ್ರತಿಪಾದಿಸಿದ್ದಾರೆ. ಸಮರ್ಪಕ ರಾಜಕೀಯ ಪ್ರಾತಿನಿಧ್ಯ ನೀಡದೆ ನಿರ್ಲಕ್ಷಿಸಿದರೆ, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಇದರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಪಕ್ಷದ ಹೈಕಮಾಂಡ್‌ಗೆ ಜಬ್ಬಾರ್ ಎಚ್ಚರಿಕೆ ರವಾನಿಸಿದ್ದಾರೆ.








