ನವದೆಹಲಿ: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಪರಿಶಿಷ್ಟ ಜಾತಿ (SC) ಸ್ಥಾನಮಾನಕ್ಕೆ ಅರ್ಹರಾಗಿರುತ್ತಾರೆ. ಆದರೆ ಕ್ರಿಶ್ಚಿಯನ್ ಧರ್ಮ ಸೇರಿದಂತೆ ಯಾವುದೇ ಇತರ ಧರ್ಮಕ್ಕೆ ಮತಾಂತರಗೊಂಡರೆ ಅವರು ಎಸ್ ಸಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ(ಮಾ.24) ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ವ್ಯಕ್ತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ಆಂಧ್ರಪ್ರದೇಶ ಹೈಕೋರ್ಟ್‌ನ ಮೇ 2025 ರ ತೀರ್ಪನ್ನು ಪ್ರಶ್ನಿಸಿ, ಜಾತಿ ಆಧಾರಿತ ತಾರತಮ್ಯ ಮತ್ತು ನಿಂದನೆಯನ್ನು ಎದುರಿಸುತ್ತಿರುವುದಾಗಿ ಆರೋಪಿಸಿ ಪಾದ್ರಿ ಚಿಂತಾಡ ಆನಂದ್ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಈ ತೀರ್ಪು ಬಂದಿದೆ ಎಂದು ಲೈವ್‌ಲಾ ವರದಿ ಮಾಡಿದೆ.
"ಒಬ್ಬ ವ್ಯಕ್ತಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು, ಆ ಸಂಪ್ರದಾಯವನ್ನು ಅನುಸರಿಸುತ್ತಿದ್ದರೆ, ಅಂತಹ ವ್ಯಕ್ತಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲು ಸಾಧ್ಯವಿಲ್ಲ" ಎಂಬ ಆಂಧ್ರಪ್ರದೇಶ ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
1950ರ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶವು ಇದನ್ನು ಸ್ಪಷ್ಟಪಡಿಸಿದೆ. ಈ ಆದೇಶದ ಅಡಿಯಲ್ಲಿರುವ ನಿರ್ಬಂಧವು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ. 1950ರ ಆದೇಶದ ಕಲಂ 3ರಲ್ಲಿ ನಿರ್ದಿಷ್ಟಪಡಿಸದ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ, ಜನನವನ್ನು ಲೆಕ್ಕಿಸದೆ, ಪರಿಶಿಷ್ಟ ಜಾತಿ ಸ್ಥಾನಮಾನವನ್ನು ತಕ್ಷಣವೇ ಕಳೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.








