ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ 'ಕಾರ್ಯಕರ್ತ'ರೆಂದು ಕರೆದುಕೊಳ್ಳುವುದು ಇತ್ತೀಚೆಗೆ ಹೊಸ ದಂಧೆಯಾಗಿ (ಬ್ಯುಸಿನೆಸ್) ಮಾರ್ಪಟ್ಟಿದೆ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ರಸ್ತೆ ಕಾಮಗಾರಿಗೆ ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಪಂಜಾಬ್‌ನ ಆರ್‌ಟಿಐ ಕಾರ್ಯಕರ್ತನಿಗೆ ನಿರೀಕ್ಷಣಾ ಜಾಮೀನು ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಹಾಗೂ ವಿಜಯ್ ಬಿಷ್ಣೋಯ್ ಅವರಿದ್ದ ವಿಭಾಗೀಯ ಪೀಠವು, ಆರೋಪಿ ಆರ್‌ಟಿಐ ಕಾರ್ಯಕರ್ತ ರಾಕೇಶ್ ಕುಮಾರ್ ಬೆಹ್ಲ್ ಮತ್ತು ಆತನ ಸಹಚರ ರಾಜೀವ್ ಕುಮಾರ್ ಅಲಿಯಾಸ್ ಮಿಂಟು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಜಾಗೊಳಿಸಿತು. ವಿಚಾರಣೆ ವೇಳೆ, ಸರ್ಕಾರಿ ಕಾಮಗಾರಿಗಳ ಮೇಲೆ ನಿಗಾ ಇಡಲು ಇವರಿಗಿರುವ ಅಧಿಕಾರವಾದರೂ ಏನು ಎಂದು ಪೀಠವು ಕಟುವಾಗಿ ಪ್ರಶ್ನಿಸಿತು. ಆರ್‌ಟಿಐ ಕಾರ್ಯಕರ್ತರೆಂದು ಹೇಳಿಕೊಳ್ಳುವುದು ಇದೀಗ ಹೊಸ ದಂಧೆಯಾಗಿದೆ; ಕೇಂದ್ರ ಸರ್ಕಾರ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದೆ ಹಾಗೂ ಕಾಮಗಾರಿಯ ಉಸ್ತುವಾರಿಯನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಹೀಗಿರುವಾಗ ಇದನ್ನು ಪ್ರಶ್ನಿಸಲು ನೀವ್ಯಾರು ಎಂದು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಪ್ರಶ್ನಿಸಿದರು. ಅಲ್ಲದೆ, ಆರ್‌ಟಿಐ ಕಾರ್ಯಕರ್ತನೆಂದು ಹೇಳಿಕೊಳ್ಳುವ ಇದೊಂದು 'ಹಳದಿ ಪತ್ರಿಕೋದ್ಯಮ' ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಅರ್ಜಿಯನ್ನು ವಜಾಗೊಳಿಸಿದರು.
ಈ ಪ್ರಕರಣವು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಬಟಾಲಾದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಗೆ ಸಂಬಂಧಿಸಿದ್ದಾಗಿದೆ. ಈ ಕಾಮಗಾರಿಗೆ ಇಬ್ಬರು ಆರೋಪಿಗಳು ಅಡ್ಡಿಪಡಿಸಿದ್ದರು. ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದೂರುದಾರರಿಗೆ ಬೆದರಿಕೆ ಹಾಕಿದ್ದಲ್ಲದೆ, ಸ್ಥಳದಲ್ಲಿದ್ದ ಕಾರ್ಮಿಕರ ಮೇಲೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದರು ಎಂದು ಪೊಲೀಸ್ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ರಸ್ತೆ ಕಾಮಗಾರಿಯಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕಾಗಿ ತಮ್ಮನ್ನು ಈ ಪ್ರಕರಣದಲ್ಲಿ ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವುದು ಮತ್ತು ಹಲ್ಲೆ ನಡೆಸಿರುವುದು ಎಫ್‌ಐಆರ್‌ನಲ್ಲಿ ಸ್ಪಷ್ಟವಾಗಿರುವುದರಿಂದ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೇ 14ರಂದೇ ಆದೇಶಿಸಿತ್ತು.








