ಕುಂದಾಪುರದಲ್ಲಿ ಸರ್ಕಾರಿ ವೈದ್ಯನೊಬ್ಬ ಪತ್ರಕರ್ತನ ಮೇಲೆ ಹಲ್ಲೆ ನಡೆಸಿ, ಇಡೀ ವೈದ್ಯಲೋಕಕ್ಕೇ ಕಪ್ಪುಚುಕ್ಕೆ ತಂದಿದ್ದಾನೆ.
ಸುದ್ದಿ ಪ್ರಕಟಿಸಿದ ವರದಿಗಾರನ ವಿರುದ್ಧ ದ್ವೇಷ ಸಾಧಿಸಿ ಸರಕಾರಿ ಆಸ್ಪತ್ರೆಯ ವೈದ್ಯ ರೊಬ್ಬರು ಸಾರ್ವಜನಿಕವಾಗಿ ಪತ್ರಕರ್ತನ ಮೇಲೆ ಏಕಾಏಕಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. 'ಕನ್ನಡ ಪ್ರಭ' ಪತ್ರಿಕೆಯ ಕುಂದಾಪುರ ಹಾಗೂ ಬೈಂದೂರು ತಾಲೂಕು ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಹಲ್ಲೆಗೊಳಗಾದ ಪತ್ರಕರ್ತರಾಗಿದ್ದು, ಹಲ್ಲೆ ನಡೆಸಿದ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.
ಮಹೇಂದ್ರ ಕುಮಾರ್ ಶೆಟ್ಟಿ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ವೈದ್ಯರು ಬಡ ರೋಗಿಗಳಿಂದ ಚಿಕಿತ್ಸೆಯ ವೇಳೆ ಹಣ ಪಡೆಯುತ್ತಿರುವ ಬಗ್ಗೆ ಶ್ರೀಕಾಂತ್ ಹೆಮ್ಮಾಡಿ ಅವರು ತಮ್ಮ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದರು. ಈ ವರದಿಯಿಂದ ದ್ವೇಷಗೊಂಡಿದ್ದ ಡಾ. ಮಹೇಂದ್ರ ಕುಮಾರ್ ಶೆಟ್ಟಿ, ಆಗಸ್ಟ್ 21ರಂದು ಬೆಳಿಗ್ಗೆ ಕುಂದಾಪುರದ ಹೊಟೇಲ್ ಒಂದರಲ್ಲಿ ಶ್ರೀಕಾಂತ್ ಹೆಮ್ಮಾಡಿ ಅವರು ಉಪಹಾರ ಸೇವಿಸುತ್ತಿದ್ದಾಗ ಏಕಾಏಕಿ ದಾಳಿ ನಡೆಸಿ, ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾರೆ.ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿ, ಕಾರ್ಕಳ ತಾಲೂಕು ಘಟಕಗಳು ತೀವ್ರವಾಗಿ ಖಂಡಿಸಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಜನರ ಸಮಸ್ಯೆಗಳನ್ನು ಕೇಳುವುದೇ ಪತ್ರಕರ್ತನ ಕೆಲಸ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಗುತ್ತಿರುವ ತೊಂದರೆ, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆ ಮಾಡುವುದು ಪತ್ರಕರ್ತನ ಕರ್ತವ್ಯ.
ಶ್ರೀಕಾಂತ್ ಹೆಮ್ಮಾಡಿ ಕೂಡ ಅದನ್ನೇ ಮಾಡಿದ್ದರು. ಸತ್ಯ ಕೇಳಿದ್ದರು. ಆದರೆ ಪ್ರಶ್ನೆಗೆ ಉತ್ತರಿಸಬೇಕಿದ್ದ ಡಾ. ಮಹೇಂದ್ರ ಕುಮಾರ್ ಶೆಟ್ಟಿ, ಉತ್ತರದ ಬದಲು ಕೈ ಎತ್ತಿದ್ದಾರೆ.
ಬಿಳಿ ಕೋಟ್ ಹಾಕಿದರೆ ವೈದ್ಯನಾಗುವುದಿಲ್ಲ, ಮನಸ್ಸಿನಲ್ಲಿ ಮಾನವೀಯತೆ ಇರಬೇಕು. ಇಲ್ಲಿ ಕೋಟ್ ಇದೆ, ಆದರೆ ಸಂಸ್ಕಾರ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ.
ಇದು ಹಲ್ಲೆಯಲ್ಲ, ಪ್ರಜಾಪ್ರಭುತ್ವದ ಮೇಲಿನ ಹಲ್ಲೆ!*
ಒಬ್ಬ ಪತ್ರಕರ್ತನ ಮೇಲೆ ಹಲ್ಲೆ ಮಾಡುವುದು ಸುಲಭ. ಆದರೆ ಅವನು ಹಿಡಿದಿರುವ ಕಲಂ ಸತ್ಯದ್ದು. ಆ ಕಲಂಗೆ ಹೊಡೆದರೆ ಅದು ಕುಂದಾಪುರದ ಜನರ ಹಕ್ಕಿನ ಮೇಲೆ ಹೊಡೆದಂತೆ.
ಸರ್ಕಾರಿ ಆಸ್ಪತ್ರೆ ಎಂದರೆ ಡಾ. ಮಹೇಂದ್ರ ಶೆಟ್ಟಿಯ ಖಾಸಗಿ ಆಸ್ತಿಯಲ್ಲ. ಅದು ಜನರ ತೆರಿಗೆ ಹಣದಲ್ಲಿ ನಡೆಯುವ ಆಸ್ಪತ್ರೆ. ಅಲ್ಲಿ ಕೆಲಸ ಮಾಡುವ ವೈದ್ಯ ಸರ್ಕಾರದ ಸಂಬಳ ಪಡೆಯುವ ನೌಕರ, ಜನರ ಸೇವಕ. ಸೇವಕನೇ ಮಾಲೀಕನ ಮೇಲೆ ಹಲ್ಲೆ ಮಾಡಿದರೆ ಹೇಗೆ?
ಇಂದು ಶ್ರೀಕಾಂತ್ ಹೆಮ್ಮಾಡಿ ಮೇಲೆ ಹಲ್ಲೆಯಾಗಿದೆ. ನಾಳೆ ಪ್ರಶ್ನೆ ಕೇಳುವ ಪ್ರತಿಯೊಬ್ಬ ಸಾಮಾನ್ಯನ ಮೇಲೆ ಹಲ್ಲೆಯಾಗುತ್ತದೆ.
ಜಿಲ್ಲಾ ಪತ್ರಕರ್ತರ ಸಂಘ ಸುಮ್ಮನಿದೆಯೇ? ಇಂದು ಕನ್ನಡಪ್ರಭದ ವರದಿಗಾರನ ಮೇಲೆ ಹಲ್ಲೆ. ನಾಳೆ ನಿಮ್ಮ ಸರದಿ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ನಾಳೆ ಬರೆಯಲು ಕೈಗಳೇ ಉಳಿಯುವುದಿಲ್ಲ.
ಶ್ರೀಕಾಂತ್ ಹೆಮ್ಮಾಡಿ ಅವರು ಒಬ್ಬರೇ ಅಲ್ಲ.
ಅವರು ಕುಂದಾಪುರ, ಬೈಂದೂರಿನ ಜನರಿಗಷ್ಟೇ ಅಲ್ಲದೆ ಈ ದೇಶದ ಜನರ ಧ್ವನಿ.
ಆ ಧ್ವನಿಯನ್ನು ಹತ್ತಿಕ್ಕಲು ನೋಡುವುದು ಖಂಡನೀಯ.








