ಪೆರಡೂರು:
ವಸತಿ ಉದ್ದೇಶಕ್ಕಾಗಿ ಮೀಸಲಾದ 94-ಸಿ ಜಮೀನಿನಲ್ಲಿ ಕಾನೂನುಬಾಹಿರವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬ ಗಂಭೀರ ಆರೋಪ ಪೆರಡೂರಿನಲ್ಲಿ ಕೇಳಿಬಂದಿದೆ. ಬಡವರ ವಾಸದ ಮನೆಗೆ ನೀಡಿದ್ದ ಸರ್ಕಾರಿ ಜಮೀನನ್ನು ವಾಣಿಜ್ಯ ದಂಧೆಗೆ ಬಳಸಿಕೊಳ್ಳಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
94-ಸಿ ಅಡಿಯಲ್ಲಿ ಮಂಜೂರಾದ ಜಮೀನು ಕೇವಲ ವಾಸದ ಉದ್ದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಅದನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸುವುದು ಸಂಪೂರ್ಣ ಕಾನೂನುಬಾಹಿರ. ಆದರೆ ಪೆರಡೂರಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬಹುಮಹಡಿ ವಾಣಿಜ್ಯ ಕಟ್ಟಡ ತಲೆಎತ್ತಿದೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರಕರಣದ ಹಿಂದೆ ದೊಡ್ಡ ಮಟ್ಟದ ಭೂ ಅಕ್ರಮ ನಡೆದಿದ್ದು, ಸರ್ಕಾರಿ ಜಮೀನು ಲೂಟಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಮೌನವೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಂದಾಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಪರವಾನಗಿ ನೀಡಲಾಗಿದೆಯೇ? ಅಥವಾ ಪರವಾನಗಿ ಇಲ್ಲದೇ ಕಟ್ಟಡ ನಿರ್ಮಾಣವಾಗಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ.
ಈ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.
94-ಸಿ ಅಕ್ರಮದ ಹಿಂದಿನ ಅಸಲಿ ಕಹಾನಿ ಏನು? ಯಾರ ಕುಮ್ಮಕ್ಕು ಇದೆ? ಯಾವ ಅಧಿಕಾರಿಗಳು ಶಾಮೀಲಾಗಿದ್ದಾರೆ?
ಪೆರಡೂರಿನಲ್ಲಿ 94-ಸಿ ವಸತಿ ಜಮೀನಿನಲ್ಲಿ ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಾಣ ಆರೋಪ. ಸರ್ಕಾರಿ ಜಮೀನು ಲೂಟಿ, ತನಿಖೆಗೆ ಆಗ್ರಹ. ಪಬ್ಲಿಕ್ ಫೈಲ್ ವಿಶೇಷ ವರದಿ.
ಸಾಕ್ಷ್ಯ ಸಮೇತ ಸ್ಫೋಟಕ ಸತ್ಯವನ್ನು ಅತಿ ಶೀಘ್ರದಲ್ಲಿ ನಿಮ್ಮ ‘ಪಬ್ಲಿಕ್ ಫೈಲ್’ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.








